ಆನ್ಸೆಲ್ಮ್, ಸೇಂಟ್
(1034-1109). ಲ್ಯಾನ್ ಫ್ರಾಂಕ್‍ನ ತರುವಾಯ ಕ್ಯಾಂಟರ್‍ಬೆರಿ ಮಠದ ಪ್ರಧಾನ ಪದವಿಯನ್ನಲಂಕರಿಸಿದವ (1093-1109) ಬೆಕ್ ಮಠದಲ್ಲಿ ಉಪದೇಶಿಕನಾಗಿದ್ದು ತನ್ನ ಪ್ರತಿಭೆಯಿಂದ, ಸೌಶೀಲ್ಯದಿಂದ ಆ ಮಠವನ್ನು ದೊಡ್ಡ ವಿದ್ಯಾಕೇಂದ್ರವನ್ನಾಗಿ ಮಾಡಿದ. ಇವನು ಮಠಾಧಿಪತಿಯಾಗಿದ್ದ ಕಾಲ ಚಿರಸ್ಮರಣೀಯವಾದುದು. ಇವನ ಬರೆಹಗಳು ತುಂಬ ಪ್ರಭಾವಶಾಲಿಯಾಗಿದ್ದುವು. ಮನುಷ್ಯನ ಮನಸ್ಸು ದೇವರೂಪವನ್ನು ಕಲ್ಪಿಸಿಕೊಳ್ಳಬಲ್ಲುದಾದುದರಿಂದ ದೇವರಿರಲೇಬೇಕು ಎಂದು ಈತನ ವಾದ. ಮಠಾಧಿಪತಿಯ ಸ್ಥಾನಕ್ಕೆ ಬರುವವ ಅಧಿಕಾರವನ್ನು ಪೋಪನಿಂದ ಸ್ವೀಕರಿಸಬೇಕೇ ಅಥವಾ ರಾಜನಿಂದಲೇ ಎಂಬ ಜಟಿಲ ಪ್ರಶ್ನೆ ಇವನ ಕಾಲದಲ್ಲಿ ಎರಡು ಸಲ ಚರ್ಚೆಗೆ ಬಂದು, ಮಠಾಧಿಪತಿಯ ಸ್ಥಾನಕ್ಕೆ ಬರುವವ ಪೋಪನ ಹಸ್ತದಿಂದ ಅಧಿಕಾರ, ದಂಡ, ಉಂಗುರಗಳನ್ನು ಸ್ವೀಕರಿಸಬೇಕು. ರಾಜನಿಗೆ ಸ್ವಾಮಿಭಕ್ತಿ ತೋರಿಸಬೇಕು ಎಂದು ತೀರ್ಮಾನವಾಯಿತು. ಅಂದಿನಿಂದ ಈತನ ಹೆಸರು ಚರ್ಚಿನ ಚರಿತ್ರೆಯಲ್ಲಿ ಶಾಶ್ವತವಾಗಿ ನಿಂತಿತು.					
(ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ